ಕಾಮನಬಿಲ್ಲು

 ಅಧಿಕ ಸಂಖ್ಯೆಯಲ್ಲಿ ಬೀಳುತ್ತಿರುವ ಮಳೆ ಹನಿಗಳ ಮೇಲೆ ಬಿಸಿಲು ಅಥವಾ ಬೆಳುದಿಂಗಳು ಬಿದ್ದಾಗ ಸೂರ್ಯ ಅಥವಾ ಚಂದ್ರನ ನೇರಿದಿರು (180 ಅಂತರದಲ್ಲಿ) ಕಾಣಿಸಿಕೊಳ್ಳುವ ವರ್ಣಮಯ ಚಾಪ (ರೇನ್‍ಬೋ). ನೇರಿದಿರು ಬಿಂದುವಿನ ಹೆಸರು ಸೂರ್ಯವಿರುದ್ಧ ಅಥವಾ ಚಂದ್ರವಿರುದ್ಧ ಬಿಂದು. ಕಾಮನಬಿಲ್ಲು ಸಾಮಾನ್ಯವಾಗಿ ಈ ವಿರುದ್ಧ ಬಿಂದುವಿನ ಸುತ್ತಲೂ ವ್ಯಾಪಿಸಿರುತ್ತದೆ. ಈ ವಿದ್ಯಮಾನ ತೋರುವ ಮೊದಲು ನಡೆಯುವ ಭೌತ ಕ್ರಿಯೆಯಿಷ್ಟು ಬೀಳುತ್ತಿರುವ ನೀರಹನಿಗಳಲ್ಲಿ ಬೆಳಕಿನ ಕಿರಣಗಳು ವಕ್ರೀಭವನಗೊಂಡು ಒಳಹೊಕ್ಕು ಒಮ್ಮೆ ಅಥವಾ ಎರಡು ಬಾರಿ ಸಂಪೂರ್ಣ ಆಂತರಿಕವಾಗಿ ಪ್ರತಿಫಲನಗೊಂಡು ಮತ್ತೆ ವಕ್ರೀಭವಿಸಿ ಹೊರಬಂದು ವೀಕ್ಷಕನನ್ನು ತಲುಪುತ್ತವೆ. ಆಗ ಒಂದು ಅಥವಾ ಕೆಲವೊಮ್ಮೆ ಎರಡು ಕಾಮನಬಿಲ್ಲು ಆಕಾಶದಲ್ಲಿ ವಿರುದ್ಧ ಬಿಂದುವಿನ ದಿಕ್ಕಿನಲ್ಲಿ ಕಾಣಿಸುತ್ತವೆ. ಸೂರ್ಯನಿಂದ ಬಂದ ಸಮಾಂತರ ಕಿರಣಗಳು ಆಕಾಶದ ತುಂಬ ಹರಡಿರುವ ಎಲ್ಲ ಹನಿಗಳಲ್ಲೂ ಮೇಲೆ ವರ್ಣಿಸಿದಂತೆ ವರ್ತಿಸಿದರೂ ಕನಿಷ್ಠ ವಿಚಲನ ಕೋನ (ಆ್ಯಂಗಲ್ ಆಫ್ ಮಿನಿಮಂ ಡೀವಿಯೇಷನ್) ಕೊಡಬಲ್ಲ ಸ್ಥಾನಗಳಲ್ಲಿದ್ದ ಹನಿಗಳು ವೀಕ್ಷಕನ ಕಡೆಗೆ ಕಳಿಸುವ ಕಿರಣಗಳು ಮಾತ್ರ ಅಧಿಕ ತೀವ್ರತೆ ಉಳ್ಳವಾಗಿರುತ್ತವೆ. ಸೂರ್ಯ (ಚಂದ್ರ) ವಿರುದ್ಧ ಬಿಂದುವಿನ ಸುತ್ತ ವೃತ್ತಾಕಾರದ ಯಾವುದೇ ಕಂಸದ ಮೇಲಿರುವ ಮಳೆಯ ಹನಿಗಳೆಲ್ಲವೂ ಸ್ಥಿರವಾದ ವಿಚಲನಕೋನ ಕೊಡುವುದರಿಂದ ಕನಿಷ್ಠ ವಿಚಲನಕೋನದಲ್ಲಿ ಸೂರ್ಯನ ಬೆಳಕು ಕಳಿಸುವ ಹನಿಗಳೆಲ್ಲ ವೃತ್ತಾಕಾರ ಕಂಸದ ಮೇಲಿರಬೇಕು. ಅಂದರೆ ತೀವ್ರತೆ ಸಾಕಷ್ಟು ಇರುವ ಬಿಳಿ ಬಿಲ್ಲು ಕಾಣಬೇಕು. ಆದರೆ ಹೀಗೆ ಆಗದೆ ಕಾಮನ ಬಿಲ್ಲಿನಲ್ಲಿ ಬಣ್ಣ ಬಣ್ಣಗಳ ಪೂರಕ ಬಿಲ್ಲುಗಳು ಹೊಂದಿಕೊಂಡಿರುವಂತೆ ಕಾಣುವುದು ಬೆಳಕು ಸಪ್ತವರ್ಣಗಳ ಮಿಶ್ರಣವಾಗಿರುವುದರಿಂದ (ಗಿIಃಉಙಔಖ-ನೇರಿಳೆ, ಇಂಡಿಗೊ, ನೀಲಿ, ಹಸುರು, ಹಳದಿ, ಕಿತ್ತಳೆ, ಕೆಂಪು). ಕನಿಷ್ಠ ವಿಚಲನೆಯ ಕೋನಗಳು ಬೇರೆ ಬೇರೆ ಬಣ್ಣಗಳಿಗೆ ಬೇರೆ ಬೇರೆ ಬೆಲೆಗಳುಳ್ಳವಾದ್ದರಿಂದ ಮೇಲಿನ ಪ್ರತಿಯೊಂದು ಬಣ್ಣದ ಬೆಳಕೂ ತನ್ನದೇ ಆದ ಬಿಲ್ಲನ್ನು ಕೊಡುವುದು. ಇದಕ್ಕೆ ವರ್ಣವಿಭಜನೆ ಎನ್ನುತ್ತಾರೆ. ಆದ್ದರಿಂದ ಕಾಮನಬಿಲ್ಲಿನಲ್ಲಿ ಪ್ರಕಟವಾಗುವ ಏಳು ಬಣ್ಣಗಳ ಅನುಕ್ರಮ: ತೀರ ಹೊರಗಿನದು ಕೆಂಪು; ಒಳಕ್ಕೆ ಸರಿದಂತೆ ಕಿತ್ತಳೆ, ಹಳದಿ, ಹಸಿರು, ನೀಲಿ, ಗಾಢನೀಲಿ, ನೇರಿಳೆ. ಇದರ ಕೋನೀಯ ವ್ಯಾಪ್ತಿ, ಸುಮಾರು 400 -420.

 ಕೆಲವೊಮ್ಮೆ ಈ ಪ್ರಧಾನ ಬಿಲ್ಲು ಮಾತ್ರವಲ್ಲದೆ ಅದರ ಮೇಲೆ ಮಸುಕಾಗಿ ಎರಡನೆಯ ಕಾಮನಬಿಲ್ಲು ಮೂಡಿರುವುದನ್ನೂ ನೋಡಬಹುದು. ಮಳೆಯ ಹನಿಗಳಲ್ಲಿ ಎರಡು ಬಾರಿ ಆಂತರಿಕ ಪ್ರತಿಫಲನವಾಗಿ ಬಂದ ಕಿರಣಗಳು ಕನಿಷ್ಠ ವಿಚಲನ ಕೋನ ಮಾಡಿದಾಗ ಈ ಎರಡನೆಯ ಬಿಲ್ಲು ಸಿಗುತ್ತದೆ. ಈ ಬಿಲ್ಲಿನಲ್ಲಿ ಬಣ್ಣಗಳು ಪ್ರಧಾನ ಬಿಲ್ಲಿನಲ್ಲಿಯ ವಿರುದ್ಧ ಕ್ರಮದಲ್ಲಿದ್ದು ಸುಮಾರು 510 ಕೋನ ಮಾಡುವ ವೃತ್ತದ ಮೇಲೆ ಸಿಕ್ಕುತ್ತವೆ.

 ಮಳೆಯಾಗದಿದ್ದಾಗ ಕೂಡ ನೀರಿನ ತುಂತುರು ಹನಿಗಳು ಸೂರ್ಯನ ಬೆಳಕಿನ ವರ್ಣವಿಭಜನೆ ಮಾಡುವ ಅವಕಾಶವಿದ್ದರೆ ಅಲ್ಲಿ ಕಾಮನ ಬಿಲ್ಲನ್ನು ಕಾಣಬಹುದು. ಜಲಪಾತಗಳಲ್ಲಿ ಎದುರಿನಿಂದ ಸೂರ್ಯಪ್ರಕಾಶ ಬೀಳುವಾಗ ಇಂಥ ಮನೋಹರ ಬಿಲ್ಲುಗಳು ಸಾಮಾನ್ಯವಾಗಿ ಕಂಡೇ ಕಾಣುವುವು.       

                                                                            (ಆರ್.ಎಸ್.ಬಿ.)

(ಪರಿಷ್ಕರಣೆ: ಹೆಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ